ಕನ್ನಡ ರಾಜ್ಯೋತ್ಸವ 2013 ರ ವರದಿ

ವರದಿ: ಗಾಯತ್ರಿದೇವಿ ಹಿರೇಮಠ್

“ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ” – ಕುವೆಂಪು

ಸಾಗರದಾಚೆ ಕನ್ನಡದ ಡಿಂಡಿಮ ಮೊಳಗಿ ಪ್ರತಿಧ್ವನಿಸಿದ್ಧು ಅಡಿಲೇಡ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ. ಮಹಿಳೆಯರು, ಮಕ್ಕಳು ಬಣ್ಣಬಣ್ಣದ ಸೀರೆ ಉಟ್ಟು, ಉಡುಗೆ ತೊಡುಗೆಗಳನ್ನು ಹಾಕಿಕೊಂಡು ಓಡಾಡುತಿದ್ದದ್ದನ್ನು ನೋಡುವುದೇ ಒಂದು ಸಂಭ್ರಮ. ಕರ್ನಾಟಕದಲ್ಲಿ ವಾಸಿಸುವ ಅನ್ಯಭಾಷಿಕರು ಕನ್ನಡವನ್ನು ಕಲಿಯುವುದು ಎಷ್ಟು ಮುಖ್ಯವೋ.. ಹೊರನಾಡು, ಹೊರರಾಷ್ಟ್ರಗಳಿಗೆ ವಲಸೆ ಬಂದಿರುವ ಕನ್ನಡಿಗರು ಕನ್ನಡವನ್ನು ಬಳಸುವುದು, ಉಳಿಸುವುದು ಅಷ್ಟೇ ಮುಖ್ಯವಾಗಿದೆ. ಇದಕ್ಕೆ ನಿದರ್ಶನವೆನ್ನುವಂತೆ ಅಡಿಲೇಡ್ ಕನ್ನಡ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಅಧ್ಯಕ್ಷ ಉಮೇಶ್ ನಾಗಸಂದ್ರ ಅವರ ನೇತೃತ್ವದಲ್ಲಿ ಕನ್ನಡಕ್ಕೆ ಕಂಕಣಬದ್ಧರಾಗಿ ಸಂಬ್ರಮದಿಂದ ಶ್ರಮವಹಿಸಿ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಕನ್ನಡಕ್ಕಾಗಿ ಕೈಯೆತ್ತಿ ತಮ್ಮ ಕೈಯನ್ನು ಕಲ್ಪವೃಕ್ಷ ಮಾಡಿಕೊಂಡವರವರು.

ಅಡಿಲೇಡ್ ಕನ್ನಡ ಸಂಘದ ಆಶ್ರಯದಲ್ಲಿ, ಇದೇ ಅಕ್ಟೋಬರ್ ಇಪ್ಪತ್ತಾರರಂದು ೨೦೧೩ನೆ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನುಸ್ಲೊವೇನಿಯನ್ ಹಾಲ್, ದಡ್ಲಿಪಾರ್ಕ್ ನಲ್ಲಿ ಅತಿ ವಿಜ್ರುಂಬಣೆಯಿಂದ ಆಚರಿಸಲಾಯಿತು. ೨೦೦ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಸ್ಟ್ರೇಲಿಯಾದ ಆರೋಗ್ಯ ಹಾಗು ಸಮಾಜಕಲ್ಯಾಣ ಸಚಿವ ಶ್ರೀ ಜಾಕ್ ಸ್ನೆಲ್ಲಿಂಗ್ ಅವರ ಅಡ್ವೈಸರ್ ಶ್ರೀ ತುಂಗ್ ನಗೋ, Multicultural SA ಸದಸ್ಯರಾದ ಶ್ರೀಮತಿ ಮಿರಿಯಂ ಸಿಲ್ವಾ, ANZ ಬ್ಯಾಂಕ್ ನ ಶ್ರೀ ಕೆ.ಡಿ.ಸಿಂಗ್ ಮತ್ತು ಕಾರ್ಯಕ್ರಮದ ವಿವಿಧ ಪ್ರಾಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲಾರ್ಧ ಭಾಗವನ್ನು ಶ್ರೀಮತಿ ಸ್ನೇಹ ಮಹೇಶ್ ಮತ್ತು ಉತ್ತರಾರ್ಧ ಭಾಗವನ್ನು ಶ್ರೀಮತಿ ಸಂಧ್ಯಾ ನಾಗೇಶ್ ನಡೆಸಿಕೊಟ್ಟರು.

ಸಚಿವ ಶ್ರೀ ಜಾಕ್ ಸ್ನೆಲ್ಲಿಂಗ್ ಹಾಗು ಶ್ರೀಮತಿ ಮಿರಿಯಂ ಸಿಲ್ವಾ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಕನ್ನಡ ಸಂಘದ ಅಧ್ಯಕ್ಷ ಶ್ರೀ ಉಮೇಶ್ ನಾಗಸಂದ್ರ ಅವರು ಎಲ್ಲರನ್ನೂ ಸ್ವಾಗತಿಸುತ್ತಾ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮಹತ್ವ ಹಾಗೂ ಹಿನ್ನೆಲೆಯನ್ನು ಹೇಳಿದರು. ಸಚಿವ ಶ್ರೀ ಜಾಕ್ ಸ್ನೆಲ್ಲಿಂಗ್ ಅವರು ಕನ್ನಡ ನಾಡು, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ಸಂಶೋಧಿಸಿ ಬರೆದು ತಂದ ಟಿಪ್ಪಣಿ ಅವರಿಗೆ ಅನ್ಯ ಭಾಷೆಗಳ ಬಗೆಗೆ ಇರುವ ಆಸಕ್ತಿ ಹಾಗೂ ಆಸ್ಟ್ರೇಲಿಯಾದಲ್ಲಿ ವಾಸಿಸುವ ವಿವಿಧ ಜನಾಂಗಗಳ ಬಗ್ಗೆ ಅವರಿಗಿರುವ ಆದರ ಗೌರವಗಳನ್ನು ಸಾರಿ ಹೇಳುತ್ತವೆ. “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸಿ, ಕನ್ನಡದ ಶಬ್ದಗಳನ್ನು ತಮ್ಮ ಭಾಷಣದುದ್ದಕ್ಕೂ ಪ್ರಯೋಗಿಸಿದ್ದು ಕನ್ನಡಿಗರಿಗೆ ಕನ್ನಡಾಭಿಮಾನ ಹೆಚ್ಚಾಗುವಂತೆ ಮಾಡಿತು.ಅಲ್ಲದೆ ಅವರು ಅಡಿಲೈಡ್ ಕನ್ನಡ ಶಾಲೆಗೆ ಬಂದು ಕನ್ನಡ ಕಲಿಯುವ ಆಕಾಂಕ್ಷೆಯನ್ನೂ ವ್ಯಕ್ತಪಡಿಸಿದರು. ದ. ರಾ. ಬೇಂದ್ರೆ ಅವರ ಕವನದ ಸಾಲುಗಳನ್ನು ಅವರು ಹೇಳಿದ್ದು ತುಂಬಾ ಮಾರ್ಮಿಕವಾಗಿತ್ತು. ಶ್ರೀಮತಿ ಮಿರಿಯಂ ಸಿಲ್ವಾ ಅವರು ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಎಷ್ಟು ಮುಖ್ಯವೋ ಅದರೊಂದಿಗೆ ಪ್ರತಿಯೊಬ್ಬರೂ ತಮ್ಮತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದು ಅಷ್ಟೇ ಮಹತ್ವದ್ದೆಂದು ಅಭಿಪ್ರಾಯಪಟ್ಟರು. ಸುಮಾರು ಏಳುಗಂಟೆಯ ಹೊತ್ತಿಗೆ ಎಲ್ಲರೂ ಎದುರುನೋಡುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಅಲ್ಲಿಂದ ರಾತ್ರಿ ಒಂಬತ್ತೂವರೆ ತನಕ ನಮಗೆಲ್ಲ ಮೋಜು, ಮನರಂಜನೆ! ಊಟ ಮುಗಿಸಿ ಮನೆಗೆ ಹೊರಟುನಿಂತಾಗ ರಾತ್ರಿಹನ್ನೊಂದು ಗಂಟೆ.ಈ ಸಲದ ವಿಶೇಷತೆಯೆಂದರೆ ಕೇವಲ ಮಕ್ಕಳೇ ಮುಖ್ಯವಾಗಿ ಮನರಂಜನಾ ಕಾರ್ಯಕ್ರಮಗಳನ್ನು ನೀಡಿದ್ದು.

ಕುಮಾರಿ ದರ್ಶನಾ ಸೆಂದಿಲ್ ಅವರ “ಗಣೇಶ ವಂದನಾ” ಭರತನಾಟ್ಯ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. “ಚಲುವಯ್ಯ ಚಲುವೊ ತಾನಿತಂದಾನ” ಎಂದು ಕೊಲಾಟವಾಡಿದ ಸಿಯೊನ, ಸಹನಾ,ಶಕ್ತಿ, ಅನ್ಯ, ನಾಥನ್ ಮತ್ತು ಅಭಯ್ ತಂಡ ಕೋಲಾಟ ಆಡೋದ್ರಲ್ಲಿ ನಾವೇನೂ ದೊಡ್ದವರಿಗಿಂತ ಕಡಿಮೆಯಿಲ್ಲವೆಂದು ಸಾರಿಹೇಳುವಂತಿತ್ತು. ಕುಮಾರಿ ರೋಶನಿ ಮುಬಾರಕ್ ನುಡಿಸಿದ ವೈಲಿನ್ ವಾದನ ಎಲ್ಲರ ಗಮನಸೆಳೆಯಿತು. ಕುಮಾರಿ ಚುಕ್ಕಿ , ಇಂಚರ, ಹಾಗೂ ಅಲಕಾ “ಆಚೆಮನೆ ಸುಬ್ಬಮ್ಮ” ಡಾನ್ಸ್, ಕುಪ್ಪತ್ತಾಗುವವರೆಗೆ ತಿಂದು ವಪ್ಪತ್ತು ಮಾಡುವ ಬಾಯಿಮಾತಿನ ಆಚರಣೆಗಳಿಗೆ ಹಿಡಿದ ಕನ್ನಡಿಯಂತಿತ್ತು. ಕುಮಾರ ಪ್ರಣವ್ ಮತ್ತು ಸಂಭವ “ಕರುನಾಡ ತಾಯಿ ಸದಾ ಚಿನ್ಮಯಿ” ಎಂದು ಹಾಡುತ್ತ ಈ ಪುಣ್ಯ ಭೂಮಿ ನಮ್ಮ ದೇವಾಲಯ ಎಂದು ಭೂಮಿಗೆ ಬಾಗಿ ನಮಿಸುತ್ತಿದ್ದರೆ ಕುವೆಂಪು ಅವರ “ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀ ಕುಡಿಯುವ ನೀರ್ ಕಾವೇರಿ” ಸಾಲುಗಳನ್ನು ನೆನಪಿಸುತಿದ್ದವು. ಪುಳಕಿತಗೊಂಡ ಪ್ರೇಕ್ಷಕರಿಂದ ಶಿಳ್ಳೆ, ಕರತಾಡನಗಳ ಸುರಿಮಳೆಯಾಯಿತು. ಕುಮಾರಿ ಶಕ್ತಿ ಹಾಗು ಉನ್ನತಿ “ಕೋಳಿಕೆ ರಂಗ” ಹಾಡಿಗೆ ಹೆಜ್ಜೆಹಾಕಿದರು. “ಜಿಂಕೆಮರಿನಾ.. ನೀ ಜಿಂಕೆಮರಿನಾ” ಅಂತ ಕುಮಾರ ಧ್ರುವ, ಅಭಯ್, ಓಂಕಾರ್ ಮತ್ತು ಹರ್ಷ ಹೆಜ್ಜೆಹಾಕುತ್ತಿದ್ದರೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆಗಳು ಮುಗಿಲು ಮುಟ್ಟಿದವು. ಕನ್ನಡ ರೈಮ್ಸ್ ಕುಮಾರಿ ಸಿಯೊನ, ಸಹನಾ, ಶಕ್ತಿ ಹೇಳಿದರು. ಕುಮಾರಿ ದಿಶಾ ನೀಡಿದ “ಡೋಲಾರೆ ಡೋಲಾರೆ ” ಬಾಲಿವುಡ್ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆದದ್ದಲ್ಲದೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕುಮಾರಿ ಸೃಜಲ ಓದಿದ ಕನ್ನಡ ವಾರ್ತೆಗಳು ಉತ್ತರಾರ್ದ ಕಾರ್ಯಕ್ರಮಕ್ಕೆ ಮೊದಲಾಯಿತು. ಅವಳ ಸ್ಪಷ್ಟವಾದ ಕನ್ನಡ ಉಚ್ಚರಣೆ ಎಲ್ಲರ ಗಮನ ಸೆಳೆಯಿತು. ಕುಮಾರಿ ಗೌತಮಿ ಹಾಗು ಅನುಜ ಸಹೋದರಿಯರು ಫ್ಯೂಶನ್ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನರಂಜಿಸಿದರು. ಕುಮಾರಿ ಸರಸ್ವತಿಯ ಫ್ಯೂಶನ್ ಡಾನ್ಸ್ ಎಲ್ಲರನ್ನು ತನ್ನ ಮಾಯಾಲೋಕಕ್ಕೆ ಸೆಳೆಯಿತು. “ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನು ಇಂದಿನ ಮುಂದುವರಿದ ತಂತ್ರಜ್ಞಾನ ಯಾವರೀತಿ ‘ಅಭ್ಯಾಸ’ವನ್ನು ‘ಚಟ’ಕ್ಕೆ ತಿರಿಗಿಸುತ್ತದೆ ಹಾಗೂ ಅದರಿಂದಾಗುವ ವೈಯಕ್ತಿಕ ಮತ್ತು ಸಾಮಾಜಿಕ ಹಾನಿ ಇವುಗಳನ್ನು ಶ್ರೀ ಮುಬಾರಕ್ ತಂಡದವರು ಫೇಸ್ಬುಕ್ ಹರಟೆ ಎಂಬ ಪ್ರಹಸನದಲ್ಲಿ ಮನೋಜ್ಞವಾಗಿ ಅಭಿನಯಿಸಿ ತೋರಿಸಿದರು. ಅಭ್ಯಾಸಗಳು ಚಟವಾಗದಂತೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕೆಂಬ ಸಂದೇಶವೂ ಅದರಲ್ಲಿತ್ತು. ಕುಮಾರ್ ಓಂಕಾರ್ ಹಾಗೂ ತಂಡದವರ ನೃತ್ಯ ಪ್ರದರ್ಶನದೊಂದಿಗೆ ಮನರಂಜನ ಕಾರ್ಯಕ್ರಮಗಳು ಮುಕ್ತಾಯಗೊಂಡವು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕನ್ನಡ ಸಂಘದ ಕಾರ್ಯದರ್ಶಿ ಶ್ರೀ ಷಡಕ್ಷರಿ ಅಡವಯ್ಯನಮಠ್ ಅವರು ಆಭಾರಮನ್ನಿಸಿದರು. ಅಷ್ಟೊತ್ತಿಗಾಗಲೇ ಅಡುಗೆಯ ಸುಗಂಧ ಮೂಗಿಗೆ ಬಡಿಯುತ್ತಿತು. ಕೊನೆಗೆ ಸವಿಯೂಟದಿಂದ ಹೊಟ್ಟೆತುಂಬಿಸಿಕೊಂಡ ಪ್ರೇಕ್ಷಕರು ಪೂರ್ಣಾನಂದದೊಂದಿಗೆ ಕಾರ್ಯಕ್ರಮದ ಪರಿಪೂರ್ಣತೆಯನ್ನು ನೆನೆಯುತ್ತ ಪುಟಾಣಿಗಳ ಮನರಂಜನೆಯನ್ನು ಪ್ರೀತಿಪೂರ್ವಕವಾಗಿ ಮೆಲುಕುಹಾಕುತ್ತಾ ಮನೆಯತ್ತ ಮುಖಮಾಡಿದರು.